Search This Blog

Saturday, August 14, 2010

ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ

ಸ್ವಾತಂತ್ರ್ಯಕ್ಕೆ ಮಡಿದವರು  ಸಾವಿರಾರು ಜನ, ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಚಂದ್ರಶೇಖರ್ ಅಜಾದ್ ಹೀಗೆ ಪಟ್ಟಿ ಬಹಳ ದೊಡ್ಡದಾಗುತ್ತ ಹೋಗುತ್ತದೆ. ಆದರೆ ಪ್ರಶ್ನೆ ಮಾತ್ರ ಒಂದೇ ಒಂದು ಮನದಲ್ಲಿ ಕೊರೆಯುತ್ತದೆ. ಅದೇ ಯಾರಿಗೆ ಬಂತು ಎಲ್ಲಿಗೆ ಬಂತು ೪೭ರ ಸ್ವಾತಂತ್ರ?
ಮಡಿದವರ, ದುಡಿದವರ ಕಷ್ಟಕ್ಕೆ ಕೊನೆಗೂ ಬೆಲೆ ಇಲ್ಲವೇ? ಭಗತ್ ಸಿಂಗ್ ಇದ್ದಿದ್ದರೆ  ನಮ್ಮ ಸ್ವಾತಂತ್ರವನ್ನು ಕಂಡು ನಗುತ್ತಿದ್ದನೇನೋ. ಪಾಪ ಪುಣ್ಯಾತ್ಮ ಪ್ರಾಣತೆತ್ತು ಹುತಾತ್ಮನಾದ. ಒಂದು ರೀತಿಯಲ್ಲಿ ಬಚಾವಾದ. ಊಟ, ನಿದ್ದೆ,ಶಾಂತಿ ಇಲ್ಲದೆ ಹಗಲಿರುಳು ದುಡಿದದ್ದಕ್ಕೆ ಸಿಕ್ಕ ಪ್ರತಿಪಲವೇನೆಂದರೆ ಸ್ವಾತಂತ್ರ ಎನ್ನುವ ಸುಳ್ಳು ಹಣೆಪಟ್ಟಿ. ಜಾಗತೀಕರಣದ ಬಲೆಯಲ್ಲಿ ಬಿದ್ದು ನರಳುತ್ತಿರುವ ಈ ಸಮಯದಲ್ಲಿ ಸ್ವಾತಂತ್ರ ದಿನ ಆಚರಿಸುವ ಮನ ಹೇಗೆ ಬಂದೀತು. ಸಾವಿರಾರು ಜನ ಇನ್ನೂ ಜೀತದ ಜೀವನ ಸಾಗಿಸುತ್ತಿರುವಾಗ ಸ್ವತಂತ್ರ ಪತಾಕೆ ಹೇಗೆ ಹಾರಿಸುವುದು. ಜಾಗತೀಕರಣ, ಖಾಸಗೀಕರಣ ಎಂಬ ಜ್ವಾಲೆಯಲ್ಲಿ ಬೇಯುತ್ತಿರುವ ನಮಗೆ ಅದು ಮಳೆಗಾಲದಲ್ಲಿ ಒಲೆಯ ಮುಂದೆ ಕೂತು ಮೈ ಬೆಚ್ಚಗೆ ಮಾಡಿಕೊಳ್ಳುವ ಒಲೆಯ ಬೆಂಕಿಯಲ್ಲ ಅದು ಒಂದು ಬೆಂಕಿಯ ಜ್ವಾಲೆಯ ವ್ಯೂಹ ಎಂಬುದನ್ನರಿಯಲು ಎಷ್ಟು ವರ್ಷಗಳು ಬೇಕೋ. ನಾವು ಸ್ವತಂತ್ರರು ಎಂಬ ಸುಳ್ಳು ಹಣೆಪಟ್ಟಿ ನಮಗೆ ನಿಜವಾಗಲೂ ಬೇಕಾ? ೬೩ ವರ್ಷಗಳ ನಂತರವೂ ನಾವು ಪೂರ್ಣ ಸ್ವತಂತ್ರರಲ್ಲ ಎಂಬ ಯೋಚನೆ ಬರುತ್ತಿದೆ. ಅಮೆರಿಕೆಯ ತಾಳಕ್ಕೆ ಎಷ್ಟು ವರ್ಷ ಕುಣಿಯುತ್ತಾರೋ  ಅಲ್ಲಿಯವರೆಗೆ ನಾವು ಪರತಂತ್ರರೆ. ಇದು ಅಪ್ಪಟ ಸತ್ಯ. ಹಾರಿಸಿ ಸುಳ್ಳು ಪತಾಕೆಯ, ಕೂಗಿ ಕೂಗಿ ಹೇಳಿ ನಾವು ಸ್ವತಂತ್ರರೆಂದು.

No comments:

Post a Comment